ಬಾಗ್ದಾದ್ ಕೌಲು -
ಟರ್ಕಿ, ಇರಾಕ್, ಇರಾನ್, ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪರಸ್ಪರ ರಕ್ಷಣೆಗಾಗಿ 1955ರಲ್ಲಿ ಮಾಡಿಕೊಂಡ ಒಂದು ರಕ್ಷಣಾ ಒಪ್ಪಂದ. ಈ ಬಗೆಯ ಮಧ್ಯಪ್ರಾಚ್ಯ ರಕ್ಷಣಾ ವ್ಯವಸ್ಥೆಯ ಯೋಜನೆ ಹೊಸದೇನಾಗಿರಲಿಲ್ಲ. ಟರ್ಕಿ ಮುಸ್ಸೋಲಿನಿಯ ಆಕ್ರಮಣ ವಿರುದ್ಧ ಇರಾಕ್, ಇರಾನ್ ಮತ್ತು ಅಫ್‍ಘಾನಿಸ್ಥಾನಗಳನ್ನೊಳಗೊಂಡ ಸಾದಾಬಾದ್ ಕೌಲನ್ನು (4 ಜುಲೈ 1937) ಏರ್ಪಡಿಸಿಕೊಂಡಿತ್ತು. ಆದರೆ ಈ ವ್ಯವಸ್ಥೆ ನಿಷ್ಕ್ರಿಯವಾಗಿತ್ತು. ಎರಡನೆಯ ಮಹಾ ಯುದ್ಧದ ಅನಂತರ ಅರಬ್ ಲೀಗ್ ಜೊತೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ಬ್ರಿಟನ್ ಮಧ್ಯಪ್ರಾಚ್ಯದ ರಕ್ಷಣೆಗೆ ಪ್ರಯತ್ನಿಸಿತು. ಆದರೆ ಅರಬ್‍ಲೀಗ್ ಅರಬ್ಬರನ್ನು ಸಂಘಟಿಸುವುದರಲ್ಲಿ ವಿಫಲವಾದಾಗ ಬ್ರಿಟನ್ ಅರಬ್ ರಾಜ್ಯಗಳೊಡನೆ ದ್ವಿಪಕ್ಷೀಯ ವ್ಯವಸ್ಥೆಗಳನ್ನು ಪುನಾರಚಿಸಿತು. ಜೋರ್ಡಾನಿನೊಡನೆ ಮಾಡಿಕೊಂಡ ಒಪ್ಪಂದ ಬ್ರಿಟನ್ನಿಗೆ ತನ್ನ ಆಯಕಟ್ಟಿನ ಸ್ಥಳಗಳ ರಕ್ಷಣೆಗೆ ತಾತ್ಕಾಲಿಕವಾಗಿ ಸಹಾಯ ಮಾಡಿತು. ಆದರೆ ಬ್ರಿಟನ್, ಈಜಿಪ್ಟ್ (1947) ಮತ್ತು ಇರಾಕ್ (1948) ದೇಶಗಳ ಜೊತೆ ಮಾಡಿಕೊಂಡ ಒಪ್ಪಂದಗಳು ಅರಬರ ರಾಷ್ಟ್ರೀಯತೆ, ಕಮ್ಯುನಿಸ್ಟರ ಚಟುವಟಿಕೆ ಹಾಗೂ ವಸಾಹತುಷಾಹಿ ವಿರುದ್ಧದ ಪ್ರಚಾರಗಳಿಂದಾಗಿ ನಿರುಪಯುಕ್ತವಾದುವು.

ಮಧ್ಯಪ್ರಾಚ್ಯದ ರಕ್ಷಣೆಯಲ್ಲಿ ಅಮೆರಿಕ ಹೆಚ್ಚು ಆಸಕ್ತಿವಹಿಸಿತು. ಇಸ್ರೇಲ್ ಮತ್ತು ಅರಬ್ ರಾಜ್ಯಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುವುದರ ಬಗ್ಗೆ ಬ್ರಿಟನ್ ಮತ್ತು ಫ್ರಾನ್ಸ್ ಜೊತೆ ಭಾಗವಹಿಸಿ 1950 ಮೇ 26 ರಂದು ಮಾಡಿದ ತ್ರಿಪಕ್ಷೀಯ ಘೋಷಣೆಯಲ್ಲಿ ತನ್ನ ಇಂಗಿತ ವ್ಯಕ್ತಪಡಿಸಿತು. ಅಮೆರಿಕ ಈಜಿಪ್ಟಿನೊಡನೆ ಯಾವುದಾದರೂ ಒಂದು ರೀತಿಯ ಒಪ್ಪಂದಕ್ಕೆ ಬರುವಂತೆ ಬ್ರಿಟನನ್ನು ಒತ್ತಾಯಿಸಿತು. ತತ್ಪರಿಣಾಮವಾಗಿ 1954ರಲ್ಲಿ ಆಂಗ್ಲೋ ಈಜಿಪ್ಷಿಯನ್ ಒಪ್ಪಂದವೇರ್ಪಟ್ಟಿತು. ಈ ಒಪ್ಪಂದದ ಪ್ರಕಾರ ಬ್ರಿಟನ್ ಸೂಯೆಜ್ ಕಾಲುವೆಯ ನೆಲೆಯಿಂದ ಕಾಲ್ತೆಗೆಯಿತು. ಆಗ ಈಜಿಪ್ಟ್ ಪ್ರಾದೇಶಿಕ ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸುವ ಪ್ರಯತ್ನದಲ್ಲಿ ಭಾಗವಹಿಸಲು ನಿರಾಕರಿಸಿತು. ಇಂಥ ವ್ಯವಸ್ಥೆಯಿಂದ ಪುನಃ ಬ್ರಿಟನ್ನಿನೊಂದಿಗೆ ಸಂಬಂಧಗಳನ್ನು ನವೀಕರಿಸಿದಂತಾಗುವುದೆಂದು ಈಜಿಪ್ಟ್ ಭವಿಸಿತು. ಇದರಿಂದ ರಷ್ಯವನ್ನು ಸುತ್ತುವರಿಯಬೇಕೆಂದು ಆಪೇಕ್ಷಿಸಿದ್ದ ಪಾಶ್ಚಾತ್ಯ ರಾಷ್ಟ್ರಗಳಿಗೆ ಮಧ್ಯಪ್ರಾಚ್ಯ ದುರ್ಬಲ ಸ್ಥಳವಾಗಿ ಉಳಿಯಿತು. 1949ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಉತ್ತರ ಅಟ್ಲಾಂಟಿಕ್ ಕೌಲು ಕೂಟವನ್ನು (ನ್ಯಾಟೊ) 1951ರಲ್ಲಿ ಗ್ರೀಸ್ ಮತ್ತು ಟರ್ಕಿ ಸೇರಿಕೊಂಡವು. ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳುವ ಮಾತುಕತೆಗಳನ್ನು ಟರ್ಕಿಯೇ ಅರಬ್ ರಾಜ್ಯಗಳೊಂದಿಗೆ ಆರಂಭಿಸಿತು. ಈಜಿಪ್ಟಿನ ಸಹಕಾರವನ್ನು ಪಡೆದುಕೊಳ್ಳಲು ಟರ್ಕಿ ಮಾಡಿದ ಪ್ರಯತ್ನ ಫಲಿಸಲಿಲ್ಲ. ಆದರೆ ಇರಾಕಿನೊಡನೆ ಅದರ ಸಂಧಾನಗಳು ಯಶಸ್ವಿಯಾದುವು. ಅಂತೆಯೇ 1955 ಫೆಬ್ರವರಿ 24ರಂದು ಟರ್ಕೋ-ಇರಾಕ್ ಕೌಲಿಗೆ ಈ ಎರಡು ರಾಷ್ಟ್ರಗಳೂ ಸಹಿ ಹಾಕಿದವು. ಇದೆ ಮುಂದೆ ಬಾಗ್ದಾದ್ ಕೌಲೆಂದು ಹೆಸರಾಯಿತು. 1955 ಏಪ್ರಿಲ್ 5 ರಂದು ಗ್ರೇಟ್ ಬ್ರಿಟನ್, 1955 ಸೆಪ್ಟೆಂಬರ್ 23 ರಂದು ಪಾಕಿಸ್ತಾನ, 1955 ಅಕ್ಟೋಬರ್ 12ರಂದು ಇರಾನ್ ಬಾಗ್ದಾದ್ ಕೌಲನ್ನು ಸೇರಿ ಕೊಂಡವು.

ಬಾಗ್ದಾದ್ ಕೌಲು ವಿಶ್ವಸಂಸ್ಥೆ ಪ್ರಣಾಳಿಕೆಯ 51ನೆಯ ವಿಧಿಯ ಪ್ರಕಾರ ಕೌಲಿಗೆ ಸಹಿ ಹಾಕಿದ್ದ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರಕ್ಕೆ ಅವಕಾಶ ಮಾಡಿಕೊಟ್ಟಿತು. ಕೌಲಿನ ಸದಸ್ಯರಾಷ್ಟ್ರಗಳು ಇತರ ಸದಸ್ಯರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಪ್ರವೇಶಿಸದಿರಲೂ ರಕ್ಷಣಾ ಭದ್ರತೆಯ ವಿಷಯದಲ್ಲಿ ಪರಸ್ಪರ ಸಹಕರಿಸಲೂ ಒಪ್ಪಿಕೊಂಡವು. ಈ ಉದ್ದೇಶಗಳಿಗಾಗಿ ಒಂದು ಕಾರ್ಯಾಲಯ ಮತ್ತು ಅನೇಕ ಸಮಿತಿಗಳನ್ನೂ ರಚಿಸಲಾಯಿತು, ಅಮೆರಿಕ ಈ ಕೌಲನ್ನು ಸೇರಲಿಲ್ಲ. ಆದರೆ ಅದರ ಅನೇಕ ಸಮಿತಿಗಳಲ್ಲಿ ಭಾಗವಹಿಸಿತು.

ಇತರ ಅರಬ್ ರಾಜ್ಯಗಳು ಈ ಕೌಲಿನ ನಿಯಮಗಳಿಗನುಗುಣವಾಗಿ ನಡೆದುಕೊಳ್ಳುವುವೆಂದು ಭಾವಿಸಲಾಯಿತು. ಆದರೆ ಈಜಿಪ್ಟ್ ಬಾಗ್ದಾದ್ ಕೌಲು ಅರಬ್‍ಲೀಗಿನ ರಕ್ಷಣಾ ಕೌಲನ್ನು ಉಲ್ಲಂಘಿಸಿದೆಯೆಂದು ಆಪಾದಿಸಿತು. ಇರಾಕ್ ಇದಕ್ಕೆ ಉತ್ತರವಾಗಿ ನೆರೆಯ ರಾಜ್ಯಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಿಗೆ ಅದು ಅಡ್ಡಿಬರುವುದಿಲ್ಲವೆಂದೂ ಇರಾಕ್ ಮತ್ತು ಟರ್ಕಿಯ ನಡುವೆ ಸಾಮಾನ್ಯ ಹಿತಾಸಕ್ತಿಗಳಿರುವುವೆಂದೂ ಅಂತೆಯೆ ಇರಾನಿಗೆ ಕಮ್ಯುನಿಸ್ಟರ ಪ್ರವೇಶದ ಭೀತಿ ಇರುವುದೆಂದೂ ಇಸ್ರೇಲ್ ವಿರುದ್ಧ ಇತರ ಅರಬ್ ರಾಷ್ಟ್ರಗಳು ಹೊಂದಿರುವ ಭೀತಿ ಅದಕ್ಕೂ ಇರುವುದೆಂದೂ ತಿಳಿಸಿತು. ನಾರ್‍ದರನ್ ಟೈರ್‍ನ ದೇಶಗಳ ಮತ್ತು ದಕ್ಷಿಣ ಅರಬ್ ದೇಶಗಳ ನಡುವೆ ಇರುವ ತನ್ನ ಕೇಂದ್ರಸ್ಥಾನದಿಂದಾಗಿ ಬಾಗ್ದಾದ್ ಕೌಲು ಮತ್ತು ಅರಬ್‍ಲೀಗ್ ರಕ್ಷಣಾ ಕೌಲಿನ ನಡುವೆ ವ್ಯಾಪಕವಾದ ಪ್ರಾದೇಶಿಕ ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸಲು ತನಗೆ ಅವಕಾಶ ದೊರೆಯಬಹುದೆಂದು ಇರಾಕ್ ಭಾವಿಸಿತು. 1958ರಲ್ಲಿ ಒಂದು ಕಡೆ ಈಜಿಪ್ಟ್ ಸಿರಿಯಾದೊಡನೆಯೂ ಮತ್ತೊಂದು ಕಡೆ ಇರಾಕ್ ಜೋರ್ಡಾನಿನೊಂದಿಗೂ ಪ್ರತಿಸ್ಪರ್ಧಿ ಒಕ್ಕೂಟಗಳನ್ನು ಏರ್ಪಡಿಸಿಕೊಂಡುದರ ಪರಿಣಾಮವಾಗಿ ಇರಾಕಿನ ಈ ಯೋಜನೆ ವಿಫಲವಾಗುವುದಾಗಿ ಕಂಡುಬಂತು. 1958ರ ಕೊನೆಯ ಭಾಗದಲ್ಲಿ ಸಂಯುಕ್ತ ಅರಬ್ ಗಣರಾಜ್ಯದೊಡನೆ ಸ್ನೇಹಯುತವಾಗಿದ್ದ ಶಕ್ತಿಗಳು ಇರಾಕಿನ ಹಾಷಮೈಟ್ ರಾಜಪ್ರಭುತ್ವವನ್ನು ಪದಚ್ಯುತಗೊಳಿಸಿದ ಮೇಲೆ ಇರಾಕ್ ಬಾಗ್ದಾದ್ ಕೌಲಿನಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ 1959 ಮಾರ್ಚಿ 24ರಂದು ಕೌಲಿನಿಂದ ಹೊರಬಂತು. ಅನಂತರ ಕೌಲಿನ ಕೇಂದ್ರ ಕಛೇರಿಯನ್ನು ಬಾಗ್ದಾದಿನಿಂದ ಟರ್ಕಿಯ ಅಂಕಾರಕ್ಕೆ ವರ್ಗಾಯಿಸಿ ಬಾಗ್ದಾದ್ ಕೌಲಿನ ಹೆಸರನ್ನು ದಿ ಸೆಂಟ್ರಲ್‍ಟ್ರೀಟಿ ಆರ್ಗನೈಜೇಷನ್ (ಸೆಂಟೊ) ಎಂದು ಬದಲಾಯಿಸಲಾಯಿತು. 1959ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಟರ್ಕಿ, ಇರಾನ್ ಮತ್ತು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿತು. ಇಂದು ಸೆಂಟೊ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ